ಕ್ರೀಡಾಸಿದ್ಧಾಂತ 	

	ಬದುಕಲು ಸಾಮಥ್ರ್ಯ ಬೇಕು. ಇದನ್ನು ರೂಢಿಸಿಕೊಳ್ಳುವುದೇ ಜೀವನ. ಈ ಸಾಮಥ್ರ್ಯ ಕಳೆದುಕೊಳ್ಳುವುದೇ ಸಾವು. ನಿಸರ್ಗ ಸಮರ್ಥ ಜೀವಿಗಳಿಗೆ ಮಾತ್ರ ಅವಕಾಶ ನೀಡುತ್ತದೆ. ಇದನ್ನೇ ಜೀವನ ಸಂಗ್ರಾಮ ಎನ್ನುವರು. ಆದ್ದರಿಂದ ಜೀವನ ಒಂದು ತೀವ್ರ ಹೋರಾಟ. ಇಂಥ ಹೋರಾಟಕ್ಕೆ ಬೇಕಾದ ಶಕ್ತಿಯನ್ನು ರೂಢಿಸಿಕೊಳ್ಳುವುದೂ ಸಹ ಆಟದ ಒಂದು ಉದ್ದೇಶ. ಸಮರ್ಥವಾಗಿ ಆಡಬೇಕಾದದ್ದು ಆಟದ ಗುರಿ. ಫಲಾಫಲಗಳನ್ನು ದೈವ ನಿರ್ಧರಿಸಬೇಕು. `ಬೊಂಬೆಯಾಟವಯ್ಯಾ . . . .ಎಂಬ ದಾಸವಾಣಿಯೂ ಇದನ್ನೇ ಹೇಳುತ್ತದೆ.

	ಆಟದಲ್ಲಿ ಸೋಲು ಅಥವಾ ಗೆಲುವು ನಿಶ್ಚಿತ. ಒಬ್ಬನ ಗೆಲುವು ಎಂದರೆ ಎದುರಾಳಿಯ ದೌರ್ಬಲ್ಯದ ಲಾಭ. ಸೋಲಿನ ಅನುಭವದಿಂದಲೇ ಗೆಲುವಿನ ಹಾದಿ ಗೋಚರ. ಗೆಲುವು ಸೋಲಿನ ನಾಂದಿಯೂ ಆಗಬಹುದು. ಇಂಥ ಹೋರಾಟದಲ್ಲಿ ಸೋತು ಗೆದ್ದವರಿದ್ದಾರೆ. ಗೆದ್ದು ಸೋತವರೂ ಉಂಟು. ಸೋಲು-ಗೆಲುವುಗಳು ಜೀವನ ಪರ್ಯಂತ ನಡೆಯುವ ಸಂಗತಿಗಳು. ಇವುಗಳ ಮೂಲವನ್ನು ಅರಿಯುವುದೂ ಸಹ ಜೀವನದ ಉದ್ದೇಶಗಳಲ್ಲಿ ಒಂದು. ಇದು ತೊಡಕಾಗಿ ಕಂಡಷ್ಟೂ ಜೀವನದಲ್ಲಿ ಜಂಜಾಟ ಹಾಗೂ ತೊಡಕುಗಳು ಹೆಚ್ಚು. ಮನುಷ್ಯ ಜೀವನದಲ್ಲಿ ಮೇಲೇರಬೆಕು. ಇದು ಆಕಾಂಕ್ಷೆ. ಸೋಲು-ಗೆಲವುಗಳ ಸಮ್ಮಿಳನದಿಂದ ಹಾಗೂ ಗೆಲವು ಹೆಚ್ಚಿದಂತೆ ಇಂಥ ಆಕಾಂಕ್ಷೆ ಈಡೇರಬಲ್ಲದು. ಇದೇ ಜೀವನದ ಆಟ.

	ಯಾವುದೇ ಒಂದು ಆಟದಲ್ಲಿ, ಆಟಗಾರ ಸಾಧ್ಯವಿರುವ ಅನೇಕ ಅವಕಾಶಗಳಲ್ಲಿ, ಒಂದು ಸಲಕ್ಕೆ ಒಂದು ಅವಕಾಶವನ್ನು ಮಾತ್ರ ಉಪಯೋಗಿಸಬೇಕಾಗುತ್ತದೆ. ಇದಕ್ಕೆ ತಂತ್ರವೆಂತಲೂ ಕರೆಯಬಹುದು. ಆದ್ದರಿಂದ ತಂತ್ರವು ಒಬ್ಬ ಆಟಗಾರ, ಒಂದು ಆಟದಲ್ಲಿ ನಿಯೋಜಿಸಿಕೊಳ್ಳಬಲ್ಲ ಪ್ರಕ್ರಿಯೆ. ಆಟವಾಡುವ ಪ್ರತಿಯೊಬ್ಬನಿಗೂ ಇಂಥ ತಂತ್ರಗಳು ಸಾಕಷ್ಟಿದ್ದು, ಒಂದು ಸಲಕ್ಕೆ ಒಂದನ್ನು ಮಾತ್ರ ಆಯ್ದುಕೊಳ್ಳಬೇಕಾಗುತ್ತದೆ. ಇದರಿಂದ ಆಟದ ಪರಿಣಾಮ ಹೀಗೆ ಆಗಬಹುದೆಂದು ನಿರ್ಧರಿಸುವುದು ಕಷ್ಟಸಾಧ್ಯ. ಅದಕ್ಕಾಗಿ ಅಲ್ಲಿನ ತೀವ್ರ ಪೈಪೋಟಿ ಎದುರಿಸಬೇಕೆಂದಾಗ ಆಟದ (ಬದುಕುವ) ಹೊಸ ತಂತ್ರಗಳನ್ನು ರೂಢಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಆಟದಲ್ಲಿ ಗೆಲ್ಲಬೇಕೆಂದರೆ ತಂತ್ರ, ಜಾಣ್ಮೆ ಹಾಗೂ ಆಯಕಟ್ಟಿನಿಂದ ಕೂಡಿರಬೇಕು. ಅಂದರೆ ಆಟವೂ ಸಹ ಸಮರ್ಥ ಲೆಕ್ಕಾಚಾರವನ್ನು ಹೊಂದಿರಬೇಕಾದದ್ದು ಅನಿವಾರ್ಯ.

	ಆಟವನ್ನು ಹೀಗೆ ಲೆಕ್ಕಾಚಾರದ ಚೌಕಟ್ಟಿಗೆ ಒಳಪಡಿಸುವುದೇ ಕ್ರೀಡಾಸಿದ್ಧಾಂತ. ಇದು ಗಣಿತದ ಒಂದು ಶಾಖೆಯಾಗಿದ್ದು. ಹೋರಾಟದ (ಕಾನ್‍ಫ್ಲಿಕ್ಟ್ಸ್) ಅನೇಕ ಸಮಸ್ಯೆಗಳ ವಿಶ್ಲೇಷಣೆಯನ್ನು ಗಣಿತ ರೀತ್ಯಾ ಲೆಕ್ಕಾಚಾರ ಹಾಕಿ, ಪರಿಹಾರ ದೊರಕುವುದೇ ಇದರ ಮುಖ್ಯ ಉದ್ದೇಶ. ಈ ಅಭ್ಯಾಸಕ್ರಮ ಕೆಲವೊಂದು ಆಟಗಳನ್ನು ಅವಲಂಬಿಸಿ ಬೆಳೆಯುತ್ತದೆ.

	ಚದುರಂಗ, ಪಗಡೆ, ಬ್ರಿಜ್ ಮುಂತಾದವುಗಳಿಗೆ ಯುಕ್ತಿಯ ಆಟಗಳು (ಗೇಮ್ಸ್ ಆಫ್ ಸ್ಟ್ರ್ಯಾಟೆಜಿ) ಎಂದು ಹೆಸರು. ಶತ್ರುವಿನ ಬಲವನ್ನೂ ಚಲನವಲನಗಳನ್ನೂ ಮುಂದಾಗಿಯೇ ಊಹಿಸಿ, ಸ್ವಂತ ಬಲವನ್ನು, ನೆಲವನ್ನು ಚೆನ್ನಾಗಿ ವಿವೇಚಿಸಿಕೊಂಡು, ದಳಗಳನ್ನು ಮುಂಚೂಣಿ ಪ್ರದೇಶಗಳಿಗೆ ಯುಕ್ತ ವೇಳೆಯಲ್ಲಿ ವಿತರಣೆ ಮಾಡುವ ಸಮರತಂತ್ರದ ಹೆಸರು ಯುಕ್ತಿ. ಇಂಥ ಒಂದು ಚಲನೆ-ಯುಕ್ತಿಯ ನಡೆ (ಸ್ಟ್ರ್ಯಾಟೆಜಿ ಮೂವ್). ಯುಕ್ತಿಯ ಆಟದಲ್ಲಿ ಸಂಘರ್ಷಣೆ (ಕಾನ್‍ಫ್ಲಿಕ್ಟ್ಸ್) ತಲೆದೋರುತ್ತವೆ. ವಿಧಿನಿಯಮಗಳಿಗನುಸಾರವಾಗಿ ಆಟವಾಡಿದಾಗ ಇಂಥ ಘರ್ಷಣೆಗಳು ಸಹಜ. ಇಂಥ ಸನ್ನಿವೇಶಗಳ ಅಮೂರ್ತ ಮಾದರಿಗಳಿಗೆ (ಅಬ್‍ಸ್ಟ್ರ್ಯಾಕ್ಟ್ ಮಾಡೆಲ್ಸ್) ಗಣಿತ ವಿಶ್ಲೇಷಣೆಗಳನ್ನು ಅನ್ವಯಿಸಿ ಬೆಳೆಸಿದ ಸಿದ್ಧಾಂತಕ್ಕೆ `ಕ್ರೀಡಾಸಿದ್ಧಾಂತ (ಥಿಯರಿ ಆಫ್ ಗೇಮ್ಸ್) ಎಂದು ಹೆಸರು.

	ಚದುರಂಗ, ಬ್ರಿಜ್ ಮುಂತಾದ ಆಟಗಳನ್ನು ಮೊದಲಬಾರಿಗೆ(1921) ಕ್ರೀಡಾಸಿದ್ಧಾಂತ ರೀತ್ಯಾ ವಿಶ್ಲೇಷಿಸಲಾಯಿತು. ಎಮಿಲಿ ಬೊರೆಲ್ ಎಂಬಾತ ಇದರ ಆದ್ಯ ಪ್ರವರ್ತಕ. ಮುಂದೆ 1928ರಲ್ಲಿ ಜಾನ್ ಫಾನ್ ನ್ಯೂಮೆನ್ ಹಾಗೂ ಆಸ್ಕರ ಮಾರ್ಗನ್‍ಸ್ಟನ್ ಎಂಬುವರು ಸ್ಪರ್ಧಾತ್ಮಕ ಆರ್ಥಿಕ ವರ್ತನೆಯನ್ನು (ಉದಾ: ಮಾರುಕಟ್ಟೆಯಲ್ಲಿನ ಆರ್ಥಿಕ ಚಟುವಟಿಕೆಗಳು) ಕ್ರೀಡಾಸಿದ್ಧಾಂತದ ಅನುಸಾರ ಅಭ್ಯಾಸಮಾಡಿ ಈ ಸಿದ್ಧಾಂತವನ್ನು ಭದ್ರವಾಗಿ ನೆಲೆಗೊಳಿಸಿದರು. ಈ ವಿಷಯ ಕುರಿತಂತೆ 1944ರಲ್ಲಿ ಒಂದು ಗ್ರಂಥವನ್ನು ಪ್ರಕಟಿಸಿದರು.

	ಒಳಾಂಗಣ ಅಥವಾ ಹೊರಾಂಗಣದ ಆಟಗಳೇ ಆಗಲಿ, ಯುದ್ಧರಂಗದ ಆಯಕಟ್ಟಿನ ಪಡೆಗಳೇ ಆಗಲಿ, ಆರ್ಥಿಕ ಹಾಗೂ ಸಾಮಾಜಿಕ ವಿದ್ಯಮಾನಗಲೇ ಆಗಲಿ, ಅವುಗಳ ಹಿನ್ನೆಲೆಯಲ್ಲಿನ ಅಮೂರ್ತ ತತ್ತ್ವಗಳು ಮೂಲಭೂತವಾಗಿ ಆಯಕಟ್ಟಿಗೆ (ಯುಕ್ತಿಗೆ) ಸಂಬಂಧಿಸಿದವುಗಳೇ ಆಗಿರುತ್ತವೆ ಎಂಬುದು ಸ್ಪಷ್ಟ. ಆದ್ದರಿಂದ ಕ್ರೀಡಾಸಿದ್ಧಾಂತ ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಅಂದಮಾತ್ರಕ್ಕೆ ನಾವು ಆಡುವ ಎಲ್ಲ ಆಟಗಳೂ ಕ್ರೀಡಾಸಿದ್ಧಾಂತದ ಪೂರ್ಣವಿಶ್ಲೇಷಣೆಗೆ ಒಳಪಡುತ್ತವೆ ಎನ್ನುವಂತಿಲ್ಲ. ಕಾರಣ, ಇಂಥಲ್ಲಿ ಮಾಡಬೇಕಾದ ಗಣನೆಗಳು ಬಹುಸಂಖ್ಯಾತವೂ, ಜಟಿಲವೂ ಆಗಿದ್ದು, ಅವುಗಳ ಕ್ರೋಢೀಕರಣ ಹಾಗೂ ವಿಶ್ಲೇಷಣೆ ಬಲು ತ್ರಾಸದಾಯಕವಾಗುತ್ತದೆ. ಮುಖ್ಯ ಸಂಗತಿ ಎಂದರೆ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ಮಾನವಿಕ ವಿಭಾಗದ ಶಾಸ್ತ್ರಗಳಲ್ಲಿ ಉಗಮಿಸುವ ಕ್ರೀಡಾ ಸದೃಶ ಸಮಸ್ಯೆಗಳಿಗೆ ಗಣಿತೋಪಕರಣದ ಅನ್ವಯವನ್ನು ಒದಗಿಸಿರುವುದು ಕ್ರೀಡಾಸಿದ್ಧಾಂತ.

	ಚದುರಂಗ, ಇಸ್ಪೀಟ್ ಮುಂತಾದ ಒಳಾಂಗಣ ಆಟಗಳನ್ನು ಆಡಲು ಕೆಲವು ನಿರ್ದಿಷ್ಟ ವಿಧಿಗಳಿವೆ.
ಆಟವನ್ನು ಪ್ರಾರಂಭಿಸಲು ಬೇಕಾದ ಒಂದು ರೀತಿ ಇರಬೇಕು.

ಆಟದಲ್ಲಿ ಒದಗಬಹುದಾದ ಯಾವುದೇ ಸಮಸ್ಯಾತ್ಮಕ ಸನ್ನಿವೇಶವನ್ನು ಎದುರಿಸಲು ಕಾನೂನುರೀತ್ಯಾ ನಡೆಗಳಿರಬೇಕು.
ಪ್ರತಿಯೊಂದು ನಡೆಯನ್ನೂ ಹೇಗೆ ತೊಡಗಿಸಬೇಕೆಂಬ ಆಯ್ಕೆ ಮಾಡಲು ಆಟಗಾರರ ಪೈಕಿ ಒಬ್ಬನನ್ನು ಮಾತ್ರ ನಿಗದಿಗೊಳಿಸಬೇಕು; ಅಥವಾ ಈ ಆಯ್ಕೆಯನ್ನು ಒಂದು ಪ್ರಾಮಿಕತಾ ಸಾಧನೆಯಿಂದ (ಚಾನ್ಸ್ ಡಿವೈಸ್) ಮಾಡುವಂತಿರಬೇಕು. (ಉದಾ: ದಾಳಗಳನ್ನು ಉರುಳಿಸಿ ಸಂಖ್ಯೆಯನ್ನು ಪಡೆಯುವ ವಿಧಾನ)

ಕೆಲವು ಸಾಂತ ನಡೆಗಳ ತರುವಾಯ ಆಟ ಮುಕ್ತಾಯವಾಗಬೇಕು; ಮತ್ತು ವಿಜಯಿ ಯಾರೆಂದು ನಿರ್ಧರಿತವಾಗಬೇಕು.

	ಈ ನಾಲ್ಕು ಅಥವಾ ತತ್ಸದೃಶ ಆದ್ಯುಕ್ತಿಗಳನ್ನು (ಆಕ್ಸಿಮ್ಸ್) ತೃಪ್ತಿಪಡಿಸುವ ಬೇರೆ ಯಾವುದೇ ಸಂಘಟ್ಟನ ಸನ್ನಿವೇಶವನ್ನೂ ಸಹ ಒಂದು ಆಟವೆಂದು ಪರಿಗಣಿಸಿ ಅದಕ್ಕೆ ಕ್ರೀಡಾಸಿದ್ಧಾಂತದ ವಿಶ್ಲೇಷಣೆಯನ್ನು ಅನ್ವಯಿಸಬಹುದು.

	ತತ್ತ್ವಜ್ಞಾನಿಗಳೂ, ವರ್ತನ ವಿಜ್ಞಾನಿಗಳೂ ಬಹುಕಾಲದಿಂದ ಪರಿಶೀಲಿಸುತ್ತಿದ್ದ ಹಲವಾರು ಸಮಸ್ಯೆಗಳಿಗೆ ಕ್ರೀಡಾಸಿದ್ಧಾಂತ ಒಂದು ಆಧಾರವನ್ನು ಒದಗಿಸಿದೆ. ಉದಾಹರಣೆಗೆ, ಸುಖೀರಾಜ್ಯದ ಕಲ್ಪನೆ, ಏಕಸ್ವಾಮ್ಯ ಸಿದ್ಧಾಂತ, ಗರಿಷ್ಟ ಮಂದಿಯ ಗರಿಷ್ಟ ಸುಖದ ಭಾವನೆ, ಸ್ವಲ್ಪ ಜನಸ್ವಾಮ್ಯ ಸ್ಪರ್ಧೆ ಇವೆಲ್ಲವೂ ಅದರ ಬೆಳಕಿನಲ್ಲಿ ನವೀಕೃತವೂ ಹೆಚ್ಚು ತೀವ್ರವೂ ಆದ ಪರೀಕ್ಷಣಕ್ಕೆ ಒಳಗಾಗಿವೆ. ಗರಿಷ್ಟ ಸುಖದ ಭಾವನೆ ಪ್ರಾಪ್ಯವಲ್ಲವೆಂಬುದನ್ನು ತೋರಿಸಲಾಗಿದೆ. ಅದರಂತೆ ಗರೀಬಿ ಹಠಾವೋ ಸಾಧ್ಯವಿಲ್ಲ. ಏಕೆಂದರೆ ಕನಿಷ್ಟ - ಗರಿಷ್ಟ ತತ್ತ್ವ ಕಾರ್ಯಸಾಧ್ಯ. ಸಮಾಜಶಾಸ್ತ್ರ ಹಾಗೂ ರಾಜ್ಯಶಾಸ್ತ್ರಗಳಲ್ಲಿ ಹಳೆಯ ಸಮಸ್ಯೆಗಳ ವಿಶ್ಲೇಷಣೆಗೆ ಸಹಾಯಕವಾಗುವ ಮತ್ತು ಹೊಸವುಗಳ ವಿಶ್ಲೇಷಣೆಯನ್ನು ಹರಿತಗೊಳಿಸುವ ಮಾದರಿಗಳನ್ನು ರೂಪಿಸಲಾಗುತ್ತಿದೆ.

	ಕ್ರೀಡಾಸಿದ್ಧಾಂತ ಮಾನವಿಕ ಶಾಸ್ತ್ರಗಳಲ್ಲಿ ಸಾಕಷ್ಟು ಪ್ರಾಧಾನ್ಯತೆ ಗಳಿಸುತ್ತಲಿದ್ದರೂ ಸಹ ದೈಹಿಕ ಶಿಕ್ಷಣದಲ್ಲಿ ಇನ್ನು ಅಂಥ ಮನ್ನಣೆ ಪ್ರಾಪ್ತವಾಗಿಲ್ಲ. ನಮ್ಮ ದೇಶೀಯ ಕ್ರೀಡೆಗಳನ್ನೂ ಸಹ ಇಂಥ ಸಿದ್ಧಾಂತಗಳ ಮೂಲಕ ವಿಶ್ಲೇಷಿಸಿ, ಹೊಸ ರೂಪ ಪಡೆಯುವಂಥ ಪ್ರಯತ್ನವಾಗಬೇಕಿದೆ. 
(ಕೆ.ಪಿ.)
(ಪರಿಷ್ಕರಣೆ: ಜಿ.ಹೆಚ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ